ಕೋಹಿನೂರ್  

	ಜಗತ್ಪ್ರಸಿದ್ಧವಾದ ವಜ್ರ. 1849ರಲ್ಲಿ ಬ್ರಿಟಿಷ್ ರಾಜಮನೆತನದ ವಶವಾಗಿ ಈಗಲೂ ಅದರ ಸ್ವತ್ತಾಗಿ ವಿಂಡ್ಸರ್ ಅರಮನೆಯಲ್ಲಿದೆ. ಕೋಹಿನೂರ್ ಎಂದರೆ ಬೆಳಕಿನ ಗುಡ್ಡ ಎಂದು ಅರ್ಥ. ಇದರ ಪ್ರಾರಂಭದ ಇತಿಹಾಸ ಸ್ಪಷ್ಟವಾಗಿಲ್ಲ. 1526ರ ಪಾಣಿಪಟ್ ಕದನಾನಂತರ ಹುಮಾಯೂನನಿಗೆ ಗ್ವಾಲಿಯರ್ ದೊರೆ ಕೊಟ್ಟ ವಜ್ರವೇ ಇದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದು ಕರ್ಣಾಟಕದಲ್ಲಿ ಕೃಷ್ಣಾ ನದಿಯ ದಂಡೆಯ ಮೇಲಿನ ಕೊಲ್ಲೂರು ಗಣಿಯಲ್ಲಿ ದೊರಕಿದ್ದೆಂದೂ ಮೀರ್ ಜುಮ್ಲಾ ಇದನ್ನು 1656ರಲ್ಲಿ ಶಾಹಜಹಾನನಿಗೆ ಕಾಣಿಕೆಯಾಗಿ ಕೊಟ್ಟನೆಂದೂ ಮತ್ತೆ ಕೆಲವರು ವಾದಿಸುತ್ತಾರೆ. ಅಂತೂ 1739ರ ವೇಳೆಗೆ ಇದು ಮೊಗಲ್ ಚಕ್ರವರ್ತಿಗಳ ವಶದಲ್ಲಿತ್ತೆಂದೂ ಆ ವರ್ಷ ಪರ್ಷಿಯಾದ ದೊರೆ ನಾದಿರ್ ಷಾ ಮೊಗಲ್ ಚಕ್ರವರ್ತಿ ಮಹಮದ್ ಷಾನನ್ನು ಷೋಲಿಸಿ, ಇತರ ಬೆಲೆಬಾಳುವ ರತ್ನಗಳೊಡನೆ ಇದನ್ನೂ ಒಯ್ದನೆಂದೂ ಕಾಣುತ್ತದೆ, ನಾದಿರ್ ಷಾನ ಮರಣಾ ನಂತರ ಇದು ಕಾಬೂಲಿನ ದೊರೆಯ ಕೈಗೆ ಹೋಯಿತು. ಪಂಜಾಬಿನ ರಣಜಿತ್‍ಸಿಂಗ್ 1813ರಲ್ಲಿ ಆ ದೊರೆಯನ್ನು ಸೋಲಿಸಿ, ಅವನಿಂದ ಕೋಹಿನೂರನ್ನು ಪಡೆದು, ತನ್ನ ತೋಳಿನಲ್ಲಿ ಧರಿಸಿಕೊಂಡ. ರಣಜಿತ್ ಸಿಂಗ್ ತೀರಿಹೋದಮೇಲೆ ಪಂಜಾಬು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಶವಾಯಿತು. ಆ ಕಂಪನಿ ಇದನ್ನು 1849ರಲ್ಲಿ ಇಂಗ್ಲೆಂಡಿನ ವಿಕ್ಟೋರಿಯ ರಾಣಿಗೆ ನಜರುಗಾಣಿಕೆಯಾಗಿ ಒಪ್ಪಿಸಿತು. ಮೊದಲು ಇದರ ತೂಕ 191 ಕ್ಯಾರಟ್‍ಗಳಷ್ಟಿತ್ತು. 1852ರಲ್ಲಿ ಇದನ್ನು ಕಂಡರಿಸಿದಾಗ ಇದು 108 ಕ್ಯಾರಟ್ ಗಳಿಗೆ ಇಳಿಯಿತು. ಈ ವಜ್ರದ ಕಮಲ ಬಿಡಿಸಲು ಆಗ ಸು.ರೂ 1,20,000 ಖರ್ಚಾದುವು. ಇದಕ್ಕಾಗಿ ವಜ್ರಶಿಲ್ಪಿ ದಿನಕ್ಕೆ 12 ಗಂಟೆಗಳಂತೆ 38 ದಿನಗಳ ಕಾಲ ಕೆಲಸ ಮಾಡಬೇಕಾಯಿತು.						 (ಬಿ.ಎಚ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ